ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಮಂತರ್ ಗೌಡ
ಮಡಿಕೇರಿ: ನಗರದ ಸಂಪಿಗೆಕಟ್ಟೆಯಿಂದ ಮಹದೇವಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹85 ಲಕ್ಷ ವೆಚ್ಚದಲ್ಲಿ ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಮೊದಲ ಹಂತದಲ್ಲಿ ನಿರ್ಮಿಸಲಾದ 80 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ. ಮಂತರ್ ಗೌಡ ಗುರುವಾರ ಉದ್ಘಾಟಿಸಿದರು.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ದ್ವಿಚಕ್ರ ವಾಹನದಲ್ಲಿ ರಸ್ತೆಯಲ್ಲಿ ಸಂಚರಿಸುವ ಮೂಲಕ ಕಾಮಗಾರಿಯ ಗುಣಮಟ್ಟವನ್ನು ಸ್ವತಃ ವೀಕ್ಷಿಸಿದರು.
ಉಳಿದ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಎರಡೂ ಬದಿಗಳಲ್ಲಿ ವೆಟ್‌ಮಿಕ್ಸ್ ಅಳವಡಿಸಿ ಬಳಿಕ ಡಾಂಬರೀಕರಣ ನಡೆಸುವಂತೆ ಸೂಚಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಸ್ತೆ ದೀರ್ಘಕಾಲ ಬಾಳಿಕೆ ಬರುವಂತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗುತ್ತಿಗೆದಾರರು, ನಗರಸಭೆ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಕಾಮಗಾರಿಯ ಗುಣಮಟ್ಟದ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಡಾ. ಮಂತರ್ ಗೌಡ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಪಿಗೆಕಟ್ಟೆ ನಾಗರಿಕರ ಪರವಾಗಿ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಮಾತನಾಡಿ, ಸಂಪಿಗೆಕಟ್ಟೆ–ಮಹದೇವಪೇಟೆ ರಸ್ತೆಯಲ್ಲಿ ಹಲವು ವರ್ಷಗಳಿಂದ ದುರಸ್ತಿ ಕಾರ್ಯಗಳಷ್ಟೇ ನಡೆಯುತ್ತಿತ್ತು. ಇದೀಗ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದ ಸರ್ವಋತು ಕಾಂಕ್ರೀಟ್ ರಸ್ತೆ ಅಭಿವೃದ್ಧಿಯಾಗುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಪೌರಾಯುಕ್ತ ರಮೇಶ್, ವಾರ್ಡ್ ಸದಸ್ಯ ಕೆ.ಎಸ್. ರಮೇಶ್, ನಾಮನಿರ್ದೇಶಿತ ಸದಸ್ಯ ಸದಾ ಮುದ್ದಪ್ಪ, ಮುತ್ತುರಾಜ್, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾಂಗ್ರೆಸ್ ಮುಖಂಡರಾದ ಟಿ.ಎಂ. ಅಯ್ಯಪ್ಪ, ಪ್ರಕಾಶ್ ಆಚಾರ್ಯ, ಬೂತ್ ಅಧ್ಯಕ್ಷ ರಿಯಾಝದ್ದೀನ್, ಕೋಚನ ಚೇತನ್, ಚಂದ್ರಶೇಖರ್, ಮಿನಾಝ್ ಪ್ರವೀಣ್, ಲೀಲಾ ಶೇಷಮ್ಮ, ಸಂಪಿಗೆಕಟ್ಟೆ ಯುವಕ ಸಂಘದ ಗೌರವಾಧ್ಯಕ್ಷ ಈ.ಕೆ. ಶಶಿಧರನ್, ಅಧ್ಯಕ್ಷ ಪ್ರಮೋದ್, ಕೊಡಗು ಅಭಿವೃದ್ಧಿ ಸಮಿತಿ ಸಂಚಾಲಕ ಪ್ರಸನ್ನ ಭಟ್, ಕನ್ನಂಡ ಸುಧಾ ಬೊಳ್ಳಪ್ಪ, ಕನ್ನಂಡ ವಾಸು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

